ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿಯನ್ನೇ ಕೊಂದು ಸಹಜ ಸಾವು ಎಂದು ಬಿಂಬಿಸಿ ಕುಟುಂಬಸ್ಥರನ್ನು ನಂಬಿಸಿದ್ದ ಖತರ್ನಾಕ್ ಡಾಕ್ಟರ್ನನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜನರಲ್ ಸರ್ಜನ್ ಡಾ.ಮಹೇಂದ್ರರೆಡ್ಡಿ ಬಂಧಿತ ಆರೋಪಿಯಾಗಿದ್ದು, ಪತ್ನಿಗೆ ಅನಾರೋಗ್ಯ ಸಮಸ್ಯೆ ಇದ್ದ ಕಾರಣ ಈತ ಕೊಲೆ ಮಾಡಿದ್ದಾನೆ ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ.
2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹ ನಡೆದಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ, ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ, ಆ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ವಿಷಯ ಪತಿಗೆ ಗೊತ್ತಾಗಿತ್ತು. ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲ್ಲಲು ಮಹೇಂದ್ರರೆಡ್ಡಿ ಪ್ಲ್ಯಾನ್ ಮಾಡಿದ್ದ. ಹುಷಾರಿಲ್ಲದೆ ತವರುಮನೆಯಲ್ಲಿ ವೈದ್ಯೆ ಡಾ.ಕೃತಿಕಾರೆಡ್ಡಿ ಮಲಗಿದ್ದ ವೇಳೆ ಅಲ್ಲಿಗೆ ಬಂದಿದ್ದ ಈತ ಆಕೆಗೆ ಐವಿ ಇಂಜೆಕ್ಷನ್ ಮೂಲಕ ಎರಡು ದಿನ ಒಂದಷ್ಟು ಔಷಧ ನೀಡಿದ್ದ. ಬಳಿಕ ಜ್ಞಾನ ತಪ್ಪಿದ್ದ ಕೃತಿಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದಾಗಲೇ ಅವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದರು.






Comments
Leave a Comment